ಬಿ.ಬಿ.ಎಂ.ಪಿ ಚುನಾವಣೆ: ಹಾವು ಏಣಿ ಆಟ

ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗ-ಒಬಿಸಿ ಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸುವಂತಹ ಪ್ರಕ್ರಿಯೆಯನ್ನು ಮಾರ್ಚ್ 31 ರೊಳಗೆ ಪೂರ್ಣಗೊಳಿಸಲು ಸರ್ವೋಚ್ಚ ನ್ಯಾಯಾಲಯ ಅವಕಾಶ ಕಲ್ಪಿಸಿ ನಿರ್ದೇಶನ ನೀಡಿದೆ. ಇದರಿಂದಾಗಿ ಬಿಬಿಎಂಪಿಗೆ ಚುನಾಯಿತ ಜನಪ್ರತಿನಿಧಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಮುಂದೂಡಿದಂತಾಗಿದೆ. ಈಗಾಗಲೇ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಅವಧಿ 2020ರಲ್ಲಿ ಮುಗಿದು ಇದೇ ಸೆಪ್ಟಂಬರಿಗೆ ಎರಡು ವರ್ಷಗಳು ಪೂರ್ಣಗೊಂಡಿವೆ. ಕರ್ನಾಟಕದ ರಾಜಧಾನಿಯಾಗಿ ಒಂದೂವರೆ ಕೋಟಿಯಷ್ಟು ಅತಿ ದೊಡ್ಡ ಜನಸಂಖ್ಯೆ ಮತ್ತು ಆರ್ಥಿಕತೆ ವಹಿವಾಟುಗಳನ್ನು ಒಳಗೊಂಡಿರುವ ಬೆಂಗಳೂರು ನಾಗರೀಕ ಆಡಳಿತ ಕೇವಲ ಅಧಿಕಾರಶಾಹಿಗಳ ಕೈಯಲ್ಲೇ ನಡೆಯುತ್ತಿರುವುದು ದುರಂತವಾಗಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ವಿಳಂಬದಿಂದ ಒಂದರ್ಥದಲ್ಲಿ ರಾಜ್ಯ ಸರ್ಕಾರದ ನೇರ ಸುಪರ್ದಿಯಲ್ಲಿ ಅಂದರೆ ಪರೋಕ್ಷವಾಗಿ ಬಿಜೆಪಿ ಏಕೈಕ ಪಕ್ಷದ ಅಣತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಾಸ್ತವ ಸಂಗತಿ. ಒಂದು ರೀತಿಯಲ್ಲಿ ಜನ ಪ್ರಾತಿನಿಧ್ಯವಿಲ್ಲದೇ ಇತರ ಪಕ್ಷಗಳ ಆಡಳಿತ ಅಥವಾ ಅಧಿಕಾರದ ಪಾಲು ಇಲ್ಲದೆ ಹೋಗಿರುವುದು ನಿಚ್ಛಳ.

ಬಿಬಿಎಂಪಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲು ಬಿಜೆಪಿ ಅಷ್ಟೊಂದು ಉತ್ಸುಕವಾಗಿಲ್ಲ ಎನ್ನುವುದು ಅದರ ನಡೆಗಳಿಂದ ಕಾಣುತ್ತದೆ.

ಅಧಿಕಾರ ವಿಕೇಂದ್ರಿಕರಣದಲ್ಲಿ ವಿಶ್ವಾಸ ಇಲ್ಲದ ಬಿಜೆಪಿಯ ಕ್ರಮ ಇದರಿಂದ ವ್ಯಕ್ತವಾಗುತ್ತಿದೆ.

ಈ ಚುನಾವಣೆಗಳನ್ನು ಸಕಾಲದಲ್ಲಿ ನಡೆಯದಂತೆ ಮಾಡುವ ಚಾಣಾಕ್ಷ ತಂತ್ರಗಳನ್ನು ಸರ್ಕಾರ ಮಾಡುತ್ತಿದೆ ಎನ್ನುವ ವ್ಯಾಪಕ ಟೀಕೆಗಳು ಕೇಳಿದ್ದಾಗಿದೆ. ಬಿಜೆಪಿಯ ಸರ್ವಮುಖಿ ವೈಫಲ್ಯ, ವ್ಯಾಪಕ ಭ್ರಷ್ಟಾಚಾರ ಮತ್ತು ಅಭಿವೃದ್ಧಿಯನ್ನೇ ಕಾಣದ ನಾಗರಿಕ ಪ್ರಶ್ನೆಗಳು, ಜನ ವಿಭಜಕ, ವಿದ್ವೇಷದ ರಾಜಕಾರಣ, ಇದರಿಂದ ಹೆಚ್ಚಿದ ಅತೃಪ್ತಿಯ ಪರಿಣಾಮವಾಗಿ ಸೋತು ಹೋಗುವ ಭಯ ಬಿಜೆಪಿಯನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ಇಟ್ಟುಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮ ಸೋಲಿನಲ್ಲಿ ವ್ಯಕ್ತಗೊಳ್ಳಬಹುದು ಎನ್ನುವ ಆತಂಕವಿದೆ. ಅದ್ದರಿಂದ ಹೇಗಾದರೂ ವಿಧಾನಸಭೆಯ ಚುನಾವಣೆಯ ನಂತರವೇ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸುವ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದಂತೆ ಇದೆ. ಕೋರ್ಟ್ ಬಳಸಿ ತಾಂತ್ರಿಕವಾಗಿ ಚುನಾವಣೆ ನಡೆಸದ ತಂತ್ರಗಾರಿಕೆಯಲ್ಲಿ ತೊಡಗಿದೆ. ಮೇಲಾಗಿ ವಾರ್ಡುಗಳ ವ್ಯಾಪ್ತಿಯ ಒಟ್ಟು ಉಸ್ತುವಾರಿ ಅವರ ಶಾಸಕರ ಸುಪರ್ದಿಗೂ ಬರುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣೆಗೆ ಸಹಾಯಕವಾಗಬಲ್ಲುದು ಎಂಬುದು ಮತ್ತೊಂದು ಅಂಶ. ಇಂತಹ ಸಂಕುಚಿತ ರಾಜಕೀಯ ದುರುದ್ದೇಶದ ಸಲುವಾಗಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನೇ ತಡೆಯುತ್ತಿದೆ. ಅದಕ್ಕೆಂದೇ 193 ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು 243 ವಾರ್ಡಗಳಿಗೆ ಹೆಚ್ಚಿಸಿರುವುದು ಮತ್ತು ಆಕ್ಷೇಪವಾಗುವಂತೆ ಓಬಿಸಿ ವಿಭಾಗಕ್ಕೆ ಶೇ. 33 ಸ್ಥಾನಗಳನ್ನು ಹಂಚಿಕೆ ಮಾಡಿರುವುದು ಉದ್ದೇಶಪೂರ್ವಕ ಎನ್ನುವಂತೆ ಕಾಣುತ್ತದೆ. ಸುಪ್ರೀಂ ಕೋರ್ಟ್ ಹೇಳಿದಂತೆ ಈ ವಿಭಾಗಗಳು ನ್ಯಾಯಯುತವಾಗಿ ಪ್ರಾತಿನಿದ್ಯ ಪಡೆಯಲು ಸಹಾಯಕವಾಗುವಂತೆ ಕ್ರಮಗಳನ್ನು ಕೈಗೊಳ್ಳ ಬೇಕಿತ್ತು. ಆದರೆ ಅದು ಸುಗಮವಾಗದಂತಹ ನಿಲುವು, ಕ್ರಮ ವಹಿಸಲಾಗಿದೆ. ದತ್ತಾಂಶ ಸಂಗ್ರಹಿಸಿ ನೀಡಲು ಆಯೋಗವೊಂದರ ರಚನೆಯೂ ವಿಳಂಬವಾಗಿದೆ. ಇದು ಮುಂದಿನ ಮೂರು ತಿಂಗಳೊಳಗೆ ದತ್ತಾಂಶ ಸಂಗ್ರಹಿಸಿ ವರದಿ ನೀಡುವುದೇ ಅನುಮಾನ. ಈ ಪ್ರಶ್ನೆಯನ್ನು ನ್ಯಾಯ ಪೀಠದ ಮುಂದೆ ಎತ್ತಲಾಗಿದೆ. ಒಟ್ಟು ವಿದ್ಯಾಮಾನಗಳನ್ನು ಗಮನಿಸಿದರೆ ಬಿಬಿಎಂಪಿ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯಗಳ ನಡುವೆ ಹಾವು ಏಣಿ ಆಟ ನಡೆದಂತೆ ಕಾಣಿಸುತ್ತದೆ. ಗೌರವಾನ್ವಿತ ನ್ಯಾಯಾಲಯ ಒಬಿಸಿ ವಿಭಾಗಗಳಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕು ಎನ್ನುವ ಪ್ರಯತ್ನವನ್ನು ಒಪ್ಪುವಾಗಲೇ, ಸರಕಾರದ ಆಟಗಳನ್ನು ಅರ್ಥ ಮಾಡಿಕೊಳ್ಳದೇ ಹೋಯಿತೇ ಎನ್ನುವುದು ವಿಷಾದನೀಯ. ಏಕೆಂದರೆ ಆಡಳಿತ ವಿಕೇಂದ್ರಿಕರಣದಲ್ಲಿ ಪ್ರಜಾಸತ್ತಾತ್ಮಕವಾಗಿ ಆಡಳಿತ ನೆಲೆಗೊಂಡು ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ್ದು ಎನ್ನುವ ಅಂಶವನ್ನು ಮತ್ತೊಂದು ಮಗ್ಗುಲಿನ ಪ್ರಶ್ನೆಯಾಗಿ ತೆಗೆದುಕೊಳ್ಳಬೇಕಿತ್ತು. ಅದಕ್ಕೆ ಪೂರಕವಾದ ರೀತಿಯಲ್ಲಿ ಸರ್ಕಾರವು ನ್ಯಾಯಾಲಯದ ಮುಂದೆ ವಾದ ಹೂಡಬೇಕಿತ್ತು, ಆದರೆ ಸರ್ಕಾರಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಅದರ ನಡೆಗಳಿಂದಲೇ ಸ್ಪಷ್ಟವಾಗುತ್ತದೆ.

BBMP 243 Wards

ಅಧಿಕಾರಶಾಹಿ ಆಡಳಿತವೆಂದರೆ ಜನತೆಗೆ ಅಥವಾ ಜನಪ್ರಾತಿನಿಧ್ಯಕ್ಕೆ ಅಷ್ಟಾಗಿ ಉತ್ತರದಾಯಿತ್ವ ಇಲ್ಲದಿರುವಂತಹ ಮತ್ತು ನೇರವಾಗಿ ಸರ್ಕಾರದ ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿ ನಡೆಯುವಂತೆ ಆಗಿದೆ. ವಿರೋಧ ಪಕ್ಷವೇ ಇಲ್ಲದಿರುವಾಗ, ಜನಪ್ರತಿನಿಧಿಗಳ ಕಣ್ಗಾವಲೇ ಇಲ್ಲದಿರುವಾಗ ಆಡಳಿತ ಮತ್ತು ಹಣಕಾಸಿನ ವ್ಯವಹಾರಗಳಿಗೆ ಅಂಕುಶವಾದರೂ ಎಲ್ಲಿ? ಹೀಗಾಗಿ ಇದು ನಿರಂಕುಶ ಆಡಳಿತವಾಗಿದೆ. ದುರಾಡಳಿತ ಮತ್ತು ಭ್ರಷ್ಟತೆಯ ಹಲವು ಘಟನೆಗಳು ಹೊರ ಬಿದ್ದಿವೆ.ಮೇಲಾಗಿ ಮತದಾರರ ಪಟ್ಟಿ ಪರಿಷ್ಕರಣ ಭಾರೀ ಹಗರಣವೂ ಇದೇ ಅವಧಿಯಲ್ಲಿದೆ. ಬೆಂಗಳೂರಿನಂತಹ ಮಹಾನ್ ನಗರದಲ್ಲಿ ಕೇವಲ ಅಧಿಕಾರಿಗಳ ಆಡಳಿತವೇ ಜನತೆಗೆ ಪರಿಹಾರವನ್ನು ನೀಡುತ್ತದೆ ಎಂದು ಭಾವಿಸುವುದು, ಹಾಗೆ ಬಿಂಬಿಸುವುದು ವಂಚಕತನವಾಗುತ್ತದೆ.

ನ್ಯಾಯಾಲಯವು ನೀಡಿರುವ ಕಾಲಾವಕಾಶವನ್ನು ಸೂಕ್ತವಾಗಿ ಬಳಸಿ ಪೂರ್ಣ ದತ್ತಾಂಶಗಳನ್ನು ಸಂಗ್ರಹಿಸಿ ಚುನಾವಣೆ ನಡೆಯುವಂತೆ ಸರಕಾರ ಕ್ರಮ ವಹಿಸಬೇಕು. ಇಲ್ಲವಾದರೆ ಇದು ಪ್ರಜಾಪ್ರಭುತ್ವ ವಿರೋಧಿ, ಪ್ರಜ್ಞಾಪೂರ್ವಕ ಜನದ್ರೋಹವಾಗುತ್ತದೆ.

Leave a Reply

Your email address will not be published. Required fields are marked *